ಸಂಪಿಗೆ

ಉತ್ತರ ಕೆರೊಲಿನದ ಕನ್ನಡ ಜನಮನದ
ಹೆಮ್ಮೆಯ ನಲ್ಮೆಯ ಕೂಟವಿದು
ಹಿರಿಯರು ಕಿರಿಯರು ಹದಿಹರೆಯದವರು
ಸರ್ವರು ಸೇರುವ ತಾಣವಿದು
ಅಂದವೋ ಸಂಪಿಗೆ ಚಂದವೋ ಸಂಪಿಗೆ
ಅಂದವೋ ಚಂದವೋ ಸಂಪಿಗೆ

ಕನ್ನಡವೆಂಬ ಬೇರನು ಇಟ್ಟು
ತೊಂಬತೈದರಲಿ ಚಿಗುರಿ
ಗಿಡವಾಗಿ ಮರವಾಯ್ತು ಸಂಪಿಗೆ
ಕನ್ನಡಮ್ಮಂಗ್ ಬಾಗುತ್ತ
ಜೈಜೈಕಾರ ಸಾರುತ್ತಾ
ಕನ್ನಡ ಸಿರಿ ಸಾರಿತ್ತು ಸಂಪಿಗೆ
ಹರಡುತಾ ಕನ್ನಡದ್ ಕಂಪನು
ಬೀರುತಾ ಕನ್ನಡದ್ ಸೊಂಪನು
ಹರಡುತಾ ಬೀರುತಾ ಕಂಪನು ಸೊಂಪನು
ಅಂದವೋ ಸಂಪಿಗೆ ಚಂದವೋ ಸಂಪಿಗೆ
ಅಂದವೋ ಚಂದವೋ ಸಂಪಿಗೆ

ಎಲ್ಲೇ ಇರು ನೀ ಇಲ್ಲೇ ಇರು ನೀ
ನುಡಿ ಕನ್ನಡವೆಂದಿತು ಸಂಪಿಗೆ
ಹಗಲಲಿ ಇರುಳಲಿ ದಿನ ಅವಿರತದಲಿ
ನಡೆ ಕನ್ನಡವೆಂದಿತು ಸಂಪಿಗೆ
ಬಾರಿಸು ಕನ್ನಡ ಡಿಂಡಿಮವ
ಹಚ್ಚುತ ಕನ್ನಡದ್ ದೀಪವ
ಬಾರಿಸು ಡಿಂಡಿಮ ಹಚ್ಚುತ ದೀಪವ
ಅಂದವೋ ಸಂಪಿಗೆ ಚಂದವೋ ಸಂಪಿಗೆ
ಅಂದವೋ ಚಂದವೋ ಸಂಪಿಗೆ

ಸವಿತಾ ರವಿಶಂಕರ

 

ಆಗಮ‘ ಒಂದು ನವಚೈತನ್ಯದ ಸಮಾಗಮ..,

‘ಆಗಮ’ ಕೋರುತ ನಗುವ ರಂಗೋಲಿ ಸ್ವಾಗತ ನೀಡಿತ್ತ
ರಂಗ ಸಜ್ಜಾಗಿ ಹೂವು ಹಾರದಲಿ
ಕಣ್ಣಿಗೆ ತಂಪಿತ್ತ
ಬೆನಕನ ನೆನೆದು ಬೆಳಗಿದ ದೀಪವು
ಶಾಂತಿಯ ತಂದಿತ್ತ
ಸಮಾಗಮಕೆ ಶುಭವನ್ನು ಹರಸಿತ್ತ

ಸಾಲು ಸಾಲಲಿ ನಿಂತ ಮಕ್ಕಳಲಿ
ಹರುಷದ ಹೊನಲಿತ್ತ
ಕನ್ನಡ ತಾಯಿಗೆ ನಮಿಸುತ ಹಾಡಲು
ಉತ್ಸವ ಕಂಡಿತ್ತ, ಕನ್ನಡ ಕಲಿತಾ ಗೆಲುವಿತ್ತ

ಹೆಜ್ಜೆ ತಾಳದ ಗೆಜ್ಜೆ ಘಲಿರು
ಚಾಮುಂಡಿಗೆ ನಮಿಸಿತ್ತ
ಕವಿತೆ ಲಹರಿಯು ನಾಟ್ಯ ಲಾಸ್ಯವು
ಭಾವವ ಸ್ಫುರಿಸಿತ್ತ, ಕಣ್ಮನ ತಣಿಸಿತ್ತ

ಬಣ್ಣದುಡುಗೆಯ ತೋರಿದ ನಡೆಯಲಿ
ವಯ್ಯಾರದ ಒನಪಿತ್ತ
ಕೋಲು ಕಂಸಾಳೆ ಹುಲಿಯ ವೇಷದಲಿ
ಸಂಸ್ಕೃತಿ ಮೆರೆದಿತ್ತ, ಹೆಮ್ಮೆಯ ಭಾವವು ಹೊಮ್ಮಿತ್ತ

ನವಚೈತನ್ಯದ ಹರ್ಷೋದ್ಗಾರವು
ಮುಗಿಲನು ಮುಟ್ಟಿತ್ತ
ಹಿರಿಯರ ಕಿರಿಯರ ಹದಿಹರೆಯರ ಖುಷಿ ಎಲ್ಲೆಡೆ ಹರಿದಿತ್ತ
ಆದರದಲಿ ಉಣಬಡಿಸಿದ ಊಟಕೆ ಪಾಕದ ಸವಿಯಿತ್ತ ‘ಸಂಪಿಗೆ’ ಧನ್ಯತೆ ಹೊಂದಿತ್ತಾ.

ಸವಿತಾ ರವಿಶಂಕರ

 

ಯಾಹು ಯಾಹೂ!!

ಇಂದು “ಸಂಪಿಗೆ”ಯ ಹಬ್ಬ
ಗಾಳಿ ಚಳಿಗೂ ಹಬ್ಬ
ಇಂದು ನಮಗೆಲ್ಲ ಹಬ್ಬ
ಕನ್ನಡ ಕೂಟಕ್ಕೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ಕಾಲಕ್ಕೂ ಹಬ್ಬ

ಯಾಹು ಯಾಹೂ!!

ಈ … “ಸಂಪಿಗೆ”ಯು ಅಚ್ಚರಿಯಾ ರಾಶಿ
ಅಲ್ಲಿದೆ ನಗೆಸಿರಿ. .. ಇಲ್ಲಿದೆ ಭಾಷಾ ಸಿರಿ
ಹೃದಯ ಬಯಸುವ ಸುಖದ ಚಿತ್ರಕೆ..
ಕನ್ನಡ ಪದಗಳೇ ಪರದೆಯು.,

ಇಂದು ಕೇರಿಗೆಲ್ಲ ಹಬ್ಬ
ಚಾಪೆಲ್ ಹಿಲ್ಲಲ್ಲೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಮಾರಿಸ್ವಿಲ್ಲಿನ ಮಂದಿಗೂ ಹಬ್ಬ

ಯಾಹು ಯಾಹೂ!!

ಇಂದು ಮಕ್ಕಳಿಗೆ ಹಬ್ಬ
ಅಪ್ಪ ಅಮ್ಮಂಗೂ ಹಬ್ಬ
ಇಂದು ಚೆಲುವಿನ ಹಬ್ಬ
ಕನ್ನಡದೊಲವಿನ ಹಬ್ಬ

ಓ … ಒಳ್ಳೆ ಕ್ಷಣಗಳ ಕೂಡಿಡಬೇಕು
ಕನ್ನಡ.. ಆಡುತಾ.. ಕನ್ನಡ.. ಹಾಡುತಾ.
ಕನ್ನಡಮ್ಮನ ಸೊಗಸ ಮೆರೆಸುವ
ಕೂಟಕೆ “ಸಂಪಿಗೆ” ಹೆಸರಿದೆ

ಇಂದು ಕನ್ನಡದ ಹಬ್ಬ
ಇಪ್ಪತ್ತೊಂದು ವರ್ಷದ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ಕಾಲಕ್ಕೂ ಹಬ್ಬ

ಯಾಹು ಯಾಹೂ!!

– ಸವಿತಾ ರವಿಶಂಕರ

 

“ಸಂಪಿಗೆಯಲ್ಲಿ ಸುಗ್ಗಿ”

ಪ್ರಕೃತಿಯಲ್ಲಿ ದೇವರನ್ನು ಕಾಣುವುದು ಭಾರತೀಯತೆಯ ವೈಶಿಷ್ಟ್ಯ. ಪ್ರಕೃತಿಯನ್ನು ಅನುಸರಿಸಿ ಹಬ್ಬಗಳನ್ನು ಆಚರಿಸುವುದು ನಮ್ಮಲ್ಲಿನ ವಿಶೇಷ. ಜೀವನಕ್ಕೆ ಕೃಷಿಯನ್ನೇ ನಂಬಿರುವ ಗ್ರಾಮೀಣ ಭಾಗದಲ್ಲಿ ಊರವರೆಲ್ಲ ಒಟ್ಟಾಗಿ ಸೇರಿ ಮಾಡುವ ಆಚರಣೆಯೇ ಸುಗ್ಗಿ ಹಬ್ಬ. ಬೆಳೆಯ ಕೊಯ್ಲಿನ ಸಮಯದಲ್ಲಿ ಆಚರಿಸುವ ಈ ಹಬ್ಬಕ್ಕೆ “ಸುಗ್ಗಿ ಕುಣಿತ” ಒಂದು
ಕೇಂದ್ರ ಬಿಂದು.

ಸುಗ್ಗಿ ಹಬ್ಬದಲ್ಲಿ ಉತ್ತರ ಕರ್ನಾಟಕ ಭಾಗದ ಹಾಲಕ್ಕಿ ಒಕ್ಕಲಿಗರು ಕಾಲಿಗೆ ಗೆಜ್ಜೆ ಕಟ್ಟಿ ಸುಗ್ಗಿ ಕುಣಿತದ ಕಲೆಯನ್ನು ಪ್ರದರ್ಶಿಸುತ್ತಾರೆ. ತಲೆಗೆ ಹಕ್ಕಿಗಳ ಪುಕ್ಕ ಹೂಗಳಿಂದ ಅಲಂಕರಿಸಿದ ಟೋಪಿ, ಬಣ್ಣಬಣ್ಣದ ಉಡುಗೆ ಧರಿಸಿ ಕಲಾವಿದರು ಒಂದು ಕೈಯಲ್ಲಿ ಕೋಲು ಮತ್ತೊಂದು ಕೈಯಲ್ಲಿ ನವಿಲ ಗರಿಯ ಗುಚ್ಛ ಹಿಡಿದು ಗುಂಪು ಗುಂಪಾಗಿ ಹಳ್ಳಿಯಿಂದ ಹಳ್ಳಿಗೆ ಗುಮಟೆ ವಾದ್ಯ ನುಡಿಸುತ್ತಾ, ಕೊಯ್ಲಿನ ಹಾಡುಗಳನ್ನು ಹಾಡುತ್ತಾ ಸಾಗುತ್ತಾರೆ. ಊರ ದೇವರನ್ನು ಪೂಜಿಸಿ ಹಿರಿಯ ಗೌಡರ ಮನೆಯಲ್ಲಿ ಮೊದಲ ಸುಗ್ಗಿ ಕುಣಿತ ಆಡುತ್ತಾರೆ. ಹೀಗೆ ತಮ್ಮ ಮನೆಗಳಿಗೆ ಬಂದ ಸುಗ್ಗಿಯನ್ನು ಊರಿನ ಯಜಮಾನರು ಸ್ವಾಗತಿಸಿ ಮನೆಯ ಅಂಗಳದಲ್ಲಿ ಕುಣಿಸಿ ನಂತರ ಅವರಿಗೆ ಕಾಣಿಕೆ ರೂಪದಲ್ಲಿ ಕಾಯಿ, ಆಹಾರ ಧಾನ್ಯ ಹಾಗೂ ಹಣವನ್ನು ನೀಡುತ್ತಾರೆ. ಸುಗ್ಗಿ ಅಂದರೆ ಬಣ್ಣದ ಸಂಕೇತವೂ ಹೌದು. ಈ ರೀತಿ ಸುಗ್ಗಿ ಕುಣಿತ ಮುಗಿಸಿಕೊಂಡು ಕಾಮನ ಹುಣ್ಣಿಮೆಯಂದು ‘ಕಾಮ’ ಎಂಬ ಆಕೃತಿಯನ್ನು ಸುಟ್ಟು ಹಾಕಿ ತಮ್ಮ ಮನದಲ್ಲಿರುವ ಕೆಟ್ಟ ಭಾವನೆಗಳನ್ನು ತೊರೆದುಕೊಳ್ಳುತ್ತಾರೆ. ಹೋರಿ ಬೆದರಿಸುವ ಸ್ಫರ್ಧೆ, ಕಲ್ಲು ಎತ್ತುವ ಸ್ಪರ್ಧೆ ಇತ್ಯಾದಿ ಗ್ರಾಮೀಣ ಕ್ರೀಡೆಗಳು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ.

ಸುಗ್ಗಿಯ ಈ ಸಂಭ್ರಮವು ಈಗ “ಸಂಪಿಗೆ”ಯಲ್ಲಿಯೂ ಕಂಡುಬಂದು ಹಬ್ಬಕ್ಕೆ ವಿಶೇಷ ತಯಾರಿ ಭರದಿಂದ ನಡೆದಿದೆ. ನಾಡಿನ ಸಂಸ್ಕೃತಿ ಪರಂಪರೆಯನ್ನು ಇಲ್ಲಿನ ಕನ್ನಡ ಕಂದಮ್ಮಗಳಿಗೆ ಪರಿಚಯಿಸುವುದೇ “ಸಂಪಿಗೆ ಸುಗ್ಗಿಯ” ಮೂಲ ಉದ್ದೇಶ. ಸುಗ್ಗಿ ಹಬ್ಬಕ್ಕೆ ಕನ್ನಡ ಭಾಂದವರಿಗೆಲ್ಲ ಸವಿನಯದ ಆಮಂತ್ರಣವಿದೆ. ಬನ್ನಿ ಬಿಸಿಬಿಸಿ ಕಾಫಿ, ಕರುಮ್ ಕುರುಮ್ ತಿಂಡಿ ಜೊತೆಗೆ ಬಣ್ಣಬಣ್ಣದ ಕಾರ್ಯಕ್ರಮಗಳನ್ನು ನೋಡಿ “ಸಂಪಿಗೆ” ಕನ್ನಡಿಗರೆಲ್ಲಾ ಸೇರಿ “ಸುಗ್ಗಿ” ಕುಣಿಯೋಣ.

-ಸವಿತಾ ರವಿಶಂಕರ

 

ಆ ಆ ಇ ಈ ಕನ್ನಡದ ಅಕ್ಷರಮಾಲೆ
ವನವಿಹಾರಕೆ ಸಂಪಿಗೆ ಸಂಘವು
ನೀಡಿತು ಕರೆಯೋಲೆ

ಆಟ ಊಟ ಓಟ ಕನ್ನಡ ಒಂದನೇ ಪಾಠ
ಸಂಪಿಗೆ ಬಂಧುಗಳ ಒಡನಾಟ
ಜೀವನ ರಸದೂಟ

ಕನ್ನಡಕೂಟದ ಸಿಹಿಸಿಹಿ ಕತೆಯ
ಗರಿಗರಿ ಗುಂಡನೆ ಬಾದಂಪುರಿಯ
ಚರಿತೆಯ ನಾನು ಹಾಡುವೆ

ಸಂಪಿಗೆ ಹೆಸರಿನ ಕನ್ನಡ ಕೂಟ
ಕನ್ನಡ ಕೆಚ್ಚಿನ ಹೆಮ್ಮೆಯ ಕೂಟ
ಕಿರಿಯರ ಹಿರಿಯರ ನೆಚ್ಚಿನ ಕೂಟ
ಮಕ್ಕಳು ಮೆಚ್ಚುವ ಮುದ್ದಿನ ಕೂಟ
ಪುಣ್ಯ ಭೂಮಿಯು ಕರುನಾಡು
ಸಂಪಿಗೆ ನಂಬಿದ ನೆಲೆನಾಡು

ವೀರ ವನಿತೆಯು ಆಳುತಲಿರಲು
ಕಾರ್ಯಕ್ರಮ ಆಯೋಜಿಸುತಿರಲು
ಊಟದ ವ್ಯವಸ್ಥೆ ಮಾಡುತಲಿರಲು
ಸಿಹಿಯ ಆಯ್ಕೆಯ ಯೋಚಿಸುತಿರಲು
ಸತತ ಚಿಂತೆಯಲಿ ಬಸವಳಿದು
ದಾರಿಕಾಣದೆ ಸಾಕಾಯ್ತು

ಒಬ್ಬಟ್ಟು ಲಾಡು ಮೈಸೂರ್ಪಾಕು
ಬಾದಾಂಪುರಿಯೋ ಯಾವುದು ಬೇಕು
ತಿಳಿಸಿ ನೀವುಗಳೇ ಮತವ ಹಾಕುತ
ಎನ್ನಲು ಮಂದಿಯು ವೋಟು ಹಾಕುತ
ಸಿಹಿಯ ಆಯ್ಕೆಯನು ಮಾಡಿದರು
ಬಾದಾಂಪುರಿಗೆ ಜೈ ಎಂದರು.

ಕನ್ನಡಕೂಟದ ಸಿಹಿಸಿಹಿ ಕತೆಯ
ಗರಿಗರಿ ಗುಂಡನೆ ಬಾದಂಪುರಿಯ
ಚರಿತೆಯ ನಾನು ಹಾಡುವೆ